ಚೇಂಬರ್ಲಿನ್, ಹೂಸ್ಟನ್ ಸ್ಟೂಅರ್ಟ್
1855-1927. ಆಂಗ್ಲೋ-ಜರ್ಮನ್ ಲೇಖಕ. ಇಂಗ್ಲೆಂಡಿನ ಸೌತ್ ಸೀ ಎಂಬಲ್ಲಿ ಹುಟ್ಟಿದ. ತಂದೆ ಬ್ರಿಟಿಷ್ ನೌಕಾ ಸೇನಾಧಿಪತಿ; ತಾಯಿ ನೌಕಾಧಿಪತಿಯ ಮಗಳು. ಈತ ತನ್ನ ವ್ಯಾಸಂಗವನ್ನು ವರ್‍ಸೈ. ಜಿನೀವ, ಡ್ರೇಸ್ಡನ್‍ಗಳಲ್ಲಿ ಪೂರೈಸಿ ಸಂಗೀತ, ತತ್ತ್ವಶಾಸ್ತ್ರ ಹಾಗೂ ಸೌಂದರ್ಯಮೀಮಾಂಸೆಗಳಲ್ಲಿ ಪರಿಣತನಾದ. 1908ರ ಅನಂತರ ಬೈರೂತ್‍ನಲ್ಲಿ ನೆಲಸಿ ಜರ್ಮನಿಯ ಅಪೆರ ಕರ್ತೃ ರಿಚರ್ಡ್ ವ್ಯಾಗ್ನರ್‍ನ ಶಿಷ್ಯನಾಗಿ ಆತನ ಮಗಳನ್ನು ಮದುವೆಯಾದ. ಮುಂದೆ ಚೇಂಬರ್‍ಲಿನ್ ಜರ್ಮನರ ಪರವಾದಿಯಾಗಿಯೂ ಬ್ರಿಟಿಷರ ಉಗ್ರ ವಿರೋಧಿಯಾಗಿಯೂ ಬಾಳಿದ. ಈತನ ಮುಖ್ಯ ಕೃತಿ ಡೀ ಗ್ರುಂಟ್ ಲಾಗೆನ್ ಡೆಸ್ ನಾಯ್ನ್ ಟ್ಸೆಂಟೆನ್ ಯಾರ್ ಹುಂಡೆಟ್ರ್ಸ್ (1899)-ಇದರ ಇಂಗ್ಲಿಷ್ ಅನುವಾದ ಫೌಂಡೇಷನ್ಸ್ ಆಫ್ ದಿ ನೈನ್‍ಟೀಂತ್ ಸೆಂಚುರಿ (1910)-ಇದು ಜನಾಂಗ ಸಿದ್ಧಾಂತವನ್ನು ಬೋಧಿಸುವ ಮುಖ್ಯ ಗ್ರಂಥವೆನಿಸಿದೆ. ಇಂದಿನ ಆಧುನಿಕ ಜಗತ್ತಿನ ಮಹತ್ಸಾಧನೆಗಳಿಗೆಲ್ಲ ಜರ್ಮನರೇ ಕಾರಣರೆಂದು ಈತನ ವಾದ. ಈತ ಶ್ರೀಮಂತವರ್ಗದವರ ಪರವಾದರೂ ಉಗ್ರ ಆಂಟಿ-ಸಿಮಿಟಿಸಂ ವಾದಿ. ಈತನ ಜನಾಂಗ ಸಿದ್ಧಾಂತ ಹಲವರ ಮೆಚ್ಚುಗೆ ಗಳಿಸಿದುದಲ್ಲದೆ ಅನೇಕರು ಈತನ ಅನುಯಾಯಿಗಳಾದರು. ಇದರಿಂದಾಗಿ ಈ ತತ್ತ್ವಕ್ಕೆ ಮಹತ್ತ್ವ ದೊರಕಿತು. ಈತನ ತತ್ತ್ವವನ್ನು ರಾಷ್ಟ್ರೀಯ ಸಮಾಜವಾದಿಗಳು ಮತ್ತು ಆಡಾಲ್ಪ್ ಹಿಟ್ಲರ್ ತಮ್ಮ ಉಪಯೋಗಕ್ಕೆ ಬಳಸಿಕೊಂಡಾಗ ಈ ತತ್ತ್ವ ಪರಾಕಾಷ್ಠತೆಯನ್ನು ಮುಟ್ಟಿತು. ಈತನ ತತ್ತ್ವಗಳು ಕೇಂಟ್ ಡ ಗೋಬಿನೋ ಎಂಬುವನಿಂದ ಪ್ರಭಾವಿತವಾದವು.

	ಈತ ಕೊನೆಕೊನೆಯಲ್ಲಿ ಸಂಪೂರ್ಣವಾಗಿ ಜರ್ಮನನಾದ. ಮೊದಲ ಮಹಾಯುದ್ಧದಲ್ಲಿ ಜರ್ಮನರ ಪರವಾಗಿದ್ದುದಲ್ಲದೆ 1916ರಲ್ಲಿ ಜರ್ಮನ್ ಪ್ರಜೆಯಾಗಿ ಪರಿವರ್ತನೆ ಹೊಂದಿದ.
(ಎನ್.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ